ಹಿರಿ ಜೀವದೊಳಗಿನ ಅಂತ್ಯಗೀತೆ

ನಾನು ಯಾರು ಎಂಬ ಪ್ರಶ್ನೆಗಾಗಿ ವೇದಗಳನ್ನ ಹುಡುಕುತ್ತಾ ಹೋದ ನನಗೆ, ಅತ್ಮ, ದೇಹಗಳೆಂಬ ಉತ್ತರ ಸಿಗದೆ ನಾನು ಎಂಬುದು ಕೇವಲ ನಾನು ಎಂದು ಉಳಿದ ಸತ್ಯಕ್ಕೆ ಅಂಟಿಕೊಳ್ಳುವ ಪರಿಸ್ಥಿತಿಯಲ್ಲಿ ಅನುಭವಗಳು ನನಗೆ ನಿಜವಾದ ಪಾಠ ಹೇಳಿತ್ತು. ಈ ಆಟ-ಪಾಠಗಳ ಗದ್ದಲದಲ್ಲಿ ನನ್ನ ನಿಜವಾದ ಹಿರಿಜೀವಯೊಂದು ಅರಿಸಿ ಹೊರಟ ಬುದ್ದನಂತೆ ನನ್ನ ತೊರೆದು ಹೋಯಿತ್ತು. ಆ ಹಿರಿಜೀವದ ಉದ್ದೇಶ, ಅವಳು ನೀಡಿದ ವೇದಗಳ ಸರಳ ಕಥಾನಕಗಳು, ಅಧ್ಯಾತ್ಮಿಕ ಸಾರ, ಅವಳು ನನಗೆ ನೀಡಿದ ಜಗತ್ತಿನ ಅತ್ಯುತ್ತಮವಾದ ಮಾಣಿಕ್ಯಗಳಾದ ನಗು, ಸಹನೆಗಳು ನನ್ನ ಒಬ್ಬ ವ್ಯಕ್ತಿಯಾಗಿ ನಿಲ್ಲಿಸಿವೆ. ಹೀಗೆ ಸಾವಿರ ಮಾತುಗಳನ್ನ ಹೇಳಹೊರಟರು ಅವಳ ಮೊಗವು ಅವುಗಳಿಗಿಂತಲೂ ಮಿಗಿಲು ಆದರೂ ನನ್ನ ಬದುಕಿನ ಪುಟವೂ ಅವಳಿಗಾಗಿ ಮೀಸಲು, ನನ್ನ ಅಗಲಿ ಹೋದ ಹಿರಿಜೀವವೇ ನಿನ್ನಗಿದೋ ನನ್ನ ಮನದಾಳದಿಂದ ಅಂತ್ಯಗೀತೆ...

ಅಳು ಬದುಕಿನ ಮೊದಲ ಸತ್ಯವೆಂದು ನಾನು ಅರಿತವನು. ನಗು ಎಲ್ಲವನ್ನು ಮೆರೆಸಬಲ್ಲದು ಎಂದು ತಿಳಿದವನು, ನೀನು ಹುಟ್ಟಿದು ಅದೇ ಅಳುವಿನೊಂದಿಗೆ ಮತ್ತೆ ಅದೇ ನಗುವಿನೊಂದಿಗೆ ಎಂಬ ಸತ್ಯದೊಂದಿಗೆ. ನೀನು ಹುಟ್ಟಿ ಕೈ ತುತ್ತು ತಿಂದದ್ದು ಮನೆಯಲ್ಲಿ ಅನ್ನವಿಲ್ಲಯೆಂಬ ಹಸಿವಿನೊಂದಿಗೆ. ನಿನ್ನ ಓದು ದೇವರ ಸೊತ್ತು ಯಾಕೆಂದರೆ ನೀನು ಆಗ ಕಲಿತ ಪಾಠಗಳು ಈಗ ಹಲವು ಜೀವಗಳಿಗೆ ಬೆಳಕಾಗಿ ನಿಂತಿವೆ. ಮನೆಯ ಎಲ್ಲಾ ಜವಾಬ್ದಾರಿಗಳನ್ನ ಹೊತ್ತರೂ ಎಲ್ಲವನ್ನು ಸಹಿಸುವಷ್ಟು ಕಾಳಜಿ ನಿನ್ನದು. ಮನೆಯ ಒಂದಗಳದ ಗುಟ್ಟು ಹೊರಗಾಣದಂತೆ ಮಡಿಲ ಸೇರಿದ ಅಕ್ಕಿಯಲ್ಲಿ ಕೈತುತ್ತು ತಿನ್ನಿಸಿ ಊಟ ಬಯಸದೆ ನೀರಹನಿಯಲ್ಲಿ ಹಾಸಿಗೆಗೆ ಕಾಲು ಹಾಕಿದವಳ ದೈವ ಜೀವನವಿದು. ಮನೆಯ ತುಂಬಾ ಹರಡಿದ ಕಷ್ಟಗಳಿಗೆ ತನ್ನ ಮಡಿಲಲ್ಲಿ ಜಾಗ ನೀಡಿ ನಡೆದವಳ ಸಾರ್ಥಕ ಜೀವನವಿದು. ಹೆಣ್ಣೆಂದು ಕೀಳಾಗಿ ಕಂಡವರ ನಡುವೆ ತಲೆ ಎತ್ತದೆ ಎಲ್ಲವನ್ನು ಎದುರಿಸಿ ನಿಂತ ಗಟ್ಟಿ ಕಲ್ಲಿನ ಮನದವಳು. ನೂರೊಂದು ಕಷ್ಟಗಳು ಮನೆಯ ಬಾಗಿಲ ಬಡಿದರೂ ಎಲ್ಲವನ್ನು ಸ್ವೀಕರಿಸಿದಳು. ದೈವದ ಇಚ್ಚೆಗೆ ಅಡ್ಡಿಯಾಗಿದೆ ಅಮ್ಮನವರ ಪ್ರಸಾದವೆಂದುಕೊಂಡಳು, ಯಾರ ಬದುಕಲ್ಲಿಯೂ ಹೊರೆಯಾಗದೆ ತನ್ನ ದೇಹ ಸವೆಸಿದಳು, ಹುಟ್ಟಿದ ಹೆಣ್ಣು ಕುಲಕ್ಕೆ ಹೊರೆಯೆಂಬತೆ ಸೇರಿದ ಮನೆಗೆ ಸಾದ್ವಿಯಾಗಿ, ಸಾಗರದಷ್ಟು ನೋವಿನ ಸರಮಾಲೆಗೆ ಬಗ್ಗಿಕೊಂಡು, ತನ್ನ ತವರು ತಂಪಾಗಿರಲಿಯೆಂದು ನುಂಗಿ ನಿಂತಳು. ಅನ್ನವಿಲ್ಲದೆ ಒದ್ದಾಡುವಾಗ ಹಸಿದು ಬಂದ ಮಕ್ಕಳಿಗೆ ಹಿಡಿ ಕೈ ತುತ್ತ ನೀಡಿ ತನ್ನ ಹಸಿವನ್ನೇ ಮರೆತು ಮಲಗಿದಳು. ಮನೆ ಬರಿದಾಗಿ ನಿಂತಾಗ ತನ್ನ ತವರು ಎನ್ನದೇ, ಹುಟ್ಟಿದ ಮನೆ ತಂಪಾಗಿ, ಹುಟ್ಟಿಸಿದವರ ಹೊಟ್ಟೆ ತಂಪಿರಲಿಯೆಂದು ಕಾಲಿಟ್ಟ ಮನೆಯ ಮಣ್ಣ ನಂಬಿ ವ್ಯವಸಾಯಕ್ಕೆ ನಿಂತಳು. ಆಗಸದಲ್ಲಿ ಚುಕ್ಕೆಯಾಗಿ ನಿಂತ ತಾಯಿಯನ್ನ ನೆನೆಸಿ ಭೂತಾಯಿಯ ಮಗಳಾಗಿ ನಿಂತಳು. ತನ್ನ ನೋವು ತನ್ನ ಮಡಿಲ ಸುಡುವಾಗ ಎಲ್ಲವನ್ನು ಮುಚ್ಚಿಯಿಟ್ಟುಕೊಂಡು ನಗೆಯ ಮಹಾಶಿರೋಮಣಿಯಾದಳು, ಭೂತಾಯಿಯ ಸಹನೆಯ ಮೂರ್ತಿಯಾಗಿ ಬದುಕಿದಳು. ಸೋರುತಿಹ ಎನ್ನ ಮಾಳಿಗೆಯೆಂದು ಕುಳಿತವಳಿಗೆ ಅನುಜನ್ನು ನೆರಳಾಗಿ ನಿಂತಾಗ ತನ್ನ ತವರ ಋಣ ಹೇಗೆಂದು ತೀರಿಸಲಿಯೆಂದು ಅತ್ತವಳ ಕರುಳಬಂಧದ ಜೀವನವಿದು. ಎನ್ನ ಕಾಯ ಎನ್ನದೇ ದುಡಿದು ಮುಪ್ಪಾದರೂ ತನ್ನ ಮನೆಗೆ ಕೂಡಿಟ್ಟ ಹಣದಲ್ಲಿ ಬಂಗಾರವಾದಳು. ಪರರ ಚಿಂತೆ ತನ್ನಗೇಕೆ ಎನ್ನದೇ ಹುಟ್ಟಿದ ಮನೆಗೂ ಬೆಳಗಿದ ಮನೆಗೂ ಜ್ಯೋತಿಯಾದಳು. ತನ್ನವರ ಖುಷಿಗಾಗಿ, ಬಗ್ಗಿದ ಬೆನ್ನ ಹಿಡಿದು ಎಲ್ಲವನ್ನು ಮಾಡಿದಳು. ಮುಪ್ಪಿನ ಚರ್ಮದಲ್ಲಿ ನಗು ಹೊತ್ತು ತನ್ನ ತವರೆಂದು ಕುಣಿಯುತ್ತಾ ಬರುತ್ತಿದ ಜೀವದ ಜೀವನವಿದು. ತನ್ನವರಿಗೆ ಹೊರೆಯಾದೇಯೆಂದು ಬಗ್ಗಿದ ದೇಹ, ಮನೆಯ ಕಸವೂ ಕಾಣದಾಯಿತು, ಅಕ್ಕಿಯು ಅನ್ನವಾಯಿತು, ಹಿಡಿ ಕಾಳಗಳು ಹಸನಾದವು. ತನ್ನ ಮಕ್ಕಳ ಜೀವನ ಹಸನಾಗಲಿಯೆಂದು ಹಸನ್ಮಖ ಹೊತ್ತು ದೇವರ ಬೇಡಿದಳು, ತನ್ನದನ್ನದೇ ಬಂದ ಮತ್ತೊಂದು ಜೀವಕ್ಕೆ ತಾಯಿಯಾಗಿ ನಿಂತು, ತನ್ನ ತಾಯಿ ಅವಳೆಂದು ಗೌರವಿಸಿದ ಹಿರಿಜೀವದ ಜೀವನವಿದು. ಬದುಕಲ್ಲಿ ದೇಹ ಗಟ್ಟಿಯಿರುವರೆಗೂ ಎಂದಿಗೂ ಖುಷಿ ಕಾಣದೆ ತನ್ನ ಮನೆಗಾಗಿ ದುಡಿದು ತನ್ನ ತವರು ಹಸರಾಗಲಿಯೆಂದು ಬೇಡುತ್ತಾ ಕಾಲ ಕಳೆದಳು. ತನ್ನ ಮನೆಯ ಅಂಗಳ ಚೆಂದವೆಂದು ಕೂತವಳ ಬಳಿ ಬಂದ ಎಲ್ಲಾ ಜೀವಗಳಿಗೂ ತನ್ನತನ ಮರೆತು ತನ್ನ ತವರ ಹೊಗಳಿ, ತನ್ನ ನೋವ ನುಂಗಿ, ತನ್ನ ಅನುಭವ ಹಂಚಿಕೊಂಡಳು. ಬೇಸತ್ತು ಬಂದವರಿಗೆ ನಗು ಹೊತ್ತು ನೀರ ನೀಡಿದ ಜಲಮಾತೆಯ ಜೀವನವಿದು. ಸಾವಿನ ಕೊನೆಯ ಗಳಿಗೆವರೆಗೂ ತನ್ನವರ ಕಾಳಜಿಯಲ್ಲಿಯೇ ತನ್ನ ಜೀವ ಮರೆತು ಹೋದವಳ ಜೀವನವಿದು. ಯಾವುದನ್ನು ಬಯಸದೆ, ಯಾರಿಗೂ ಹಿಡಿಶಾಪ ಹಾಕದೆ ತನ್ನತನದ ಹಾದಿಯಲ್ಲಿ ನಡೆದು ಈ ಜಗದ ನಕ್ಷತ್ರವಾದಳು. ತನ್ನ ಹುಟ್ಟಿದ ಮನೆಯಲ್ಲಿಯೂ, ಮೆಟ್ಟಿದ ಮನೆಯಲ್ಲಿಯೂ  ತಾನಾಗೇ ಉಳಿದು ದೈವಪ್ರಿಯವಾಗಿ ಹೊರಟು ನಿಂತವಳ ಸಾರ್ಥಕ ಜೀವನವಿದು. ಅಂಗದ ಮೇಲೆ ಲಿಂಗವಿಟ್ಟುಕೊಂಡು ಎನ್ನದು ಕಾಯಕವೆಂದು ಸಮಾಜಕ್ಕೆ ಸಾರಿ ಕೈಲಾಸ ಕಂಡವಳ ಬಸವ ತತ್ವದ ಜೀವಾಳದವಳ ಜೀವನವಿದು. ಶಾಂತತೆ ಮತ್ತು ಮುಗ್ದತೆಯ ಪ್ರತಿರೂಪದಂತೆ ಕಂಡು ನೀನು ಜಗದ ಮಾದರಿಯೆಂದು ಹೇಳಿ ಹೊರಟವಳ ಜೀವನವಿದು. ನಮ್ಮನಗಲಿ ಹೊರಟ ಹಿರಿಜೀವವೇ ನೀನು ನಮ್ಮನೆಯ ಬೆಳಕು. ನಿನ್ನ ನೆನೆಪುಗಳು ಮರೆಯಾಗಲಾರವು, ನಿನ್ನ ಅತ್ಮ ನಮ್ಮ ಜೊತೆನೇಯಿದೆಯೆಂಬ ನಂಬಿಕೆ ನಮ್ಮದು. ನೀನು ಹಾಕಿ ಕೊಟ್ಟ ಪಥದಲ್ಲಿ ನಡೆಯುತ್ತಾ ಬರುತ್ತಿರುವೇ ನಿನ್ನ ಸಹನಾಶಕ್ತಿಯ ಬೆಳಕು ನನ್ನ ಪ್ರತಿಬಿಂಬಿಸಿದೆ. ನಿನ್ನಂತೆ ನಾನು ಸಾವನ್ನು ಬಯಸುವೆ, ಅಡಿಗಡಿಗೆ ಹೊರೆಯಾಗದೆ ನಡೆದು ನಿನ್ನ ಸೇರುವೆ, ನಿನ್ನೇ ನನ್ನ ಅಜ್ಜಿಯೆಂದು ಅಪ್ಪಿಕೊಳ್ಳುವೆ. ಹಿರಿಜೀವವೇ ಹೊರಟ ನಿಂತ ನಿನಗೆ ಸಗ್ಗವೂ ತೆರೆದು ನಿಂತು ಸ್ವಾಗತಿಸಿದೆ. ನಿನ್ನ ಬಾಳಪಥದ ಬೆಳಕು ಪ್ರಕಾಶಿಸಿದೆ. ನಿನ್ನ ಅತ್ಮವು ಮೋಕ್ಷ ಪಡೆದಿದೆ ಯಾಕೆಂದರೆ ನಿನ್ನ ಸಾರ್ಥಕ ಬದುಕು ಮೋಕ್ಷದ ಸ್ಥಾನ ಪಡೆಯಲು ಮಾದರಿ.
ನಿನ್ನಗಿದೋ ನುಡಿನಮನ
ನಿನ್ನಗಿದೋ ನುಡಿನಮನ
ನಿನ್ನಗಿದೋ ನುಡಿನಮನ

ಹಿರಿಜೀವದೊಳಗೊಂದು ಅಂತ್ಯಗೀತೆಯ ಸಾರ್ಥಕತೆಯು ನನ್ನ ಅತ್ಮವನ್ನು ಪ್ರಕಾಶಿಸಿದೆ. ಅವಳಿಗೆ ಶರಣು ಶರಣಾರ್ಥಿಗಳು......

ಇಂತಿ ನಿನ್ನ ಪ್ರೀತಿಯು
SIDDUGP


 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು